ಆಲ್ಜಿಯರ್ಸ್
ಆಲ್ಜೀರಿಯದ ಮುಖ್ಯ ರೇವು ಪಟ್ಟಣ, ರಾಜಧಾನಿ, ಹಳೆಯ ಹೆಸರು ಅಲ್ ಜೆಜೈರ್.  ಆಲ್ಜಿಯರ್ಸ್ ಕೊಲ್ಲಿಯ ಪಶ್ಚಿಮ ಅಂಚಿನ 10 ಮೈಲಿ ವಿಸ್ತಾರದಲ್ಲಿದೆ.  ಎತ್ತರವಾದ ಸಹೆಲ್ ಬೆಟ್ಟಗಳ ಇಳಿಜಾರಿನ ಮೇಲೆ ಕಟ್ಟಲಾಗಿದೆ.  ಈ ಬೆಟ್ಟಗಳು ತೀರಕ್ಕೆ ಸಮಾನಾಂತರವಾಗಿ ಹರಡಿ ಪಟ್ಟಣದ ಹಿಂಭಾಗದಲ್ಲಿ 1240 ಗಳವರೆಗೂ ಏರಿವೆ.  ಈ ಪಟ್ಟಣವನ್ನು ಪೂರ್ವ ಹಾಗೂ ಉತ್ರರಾಭಿಮುಖವಾಗಿರುವಂತೆ ದಕ್ಷಿಣ ಯೂರೋಪಿನ ಮಾದರಿಯಲ್ಲಿ ನಿರ್ಮಿಸಲಾಗಿದೆ.  ನಗರದ ಬಡಾವಣೆಯೂ ಸೇರಿ ಜನಸಂಖ್ಯೆ 5,87,570 (1964).

ಹಳೆಯ ತುರ್ಕಿಯ ಈ ರೇವುಪಟ್ಟಣ 10ನೆಯ ಶತಮಾನದಲ್ಲಿ ರೂಪುಗೊಂಡು ತುರ್ಕಿಯ ಕುಪ್ರಸಿದ್ಧ ಕಡಲುಗಳ ಖೈರ್-ಎದ್-ದಿನ್ ಅಲ್ಲಿನ ಸ್ಪೇನಿನವರನ್ನು ಹೊರ ಹೊರಡಿಸಿದಂದಿನಿಂದ (1530) ಫ್ರೆಂಚರು ಆಕ್ರಮಿಸುವವರೆಗೆ (1830) ಹಲವು ಬಗೆಯ ಕೊಲೆ ಸುಲಿಗೆಗಳಿಗೆ ಖ್ಯಾತವಾಗಿತ್ತು.  

ಈ ರೇವಿನ ಮುಖಾಂತರ 1955ರಲ್ಲಿ ಹಡಗುಗಳು 36,24,000 ಟನ್ನುಗಳಷ್ಟು ಸಾಮಗ್ರಿಯನ್ನು ರವಾನಿಸಿದುವು.  ವಾಹನಗಳು, ಪೆಟ್ರೊಲಿಯಂ ಸಾಮಗ್ರಿಗಳು, ಗೋದಿ, ಸಿಮೆಂಟ್, ಲೋಹಗಳು, ಹತ್ತಿ ಬಟ್ಟೆ, ಸಕ್ಕರೆ ಹಾಗೂ ಕಾಫಿ ಇಲ್ಲಿಗೆ ಆಮದಾಗುತ್ತದೆ.  ದ್ರಾಕ್ಷಾರಸ, ತರಕಾರಿ, ಹಣ್ಣುಗಳು, ಕಬ್ಬಿಣ ಹಾಗೂ ರಂಜಕಗಳನ್ನು ಇಲ್ಲಿಂದ ರಫ್ತು ಮಾಡಲಾಗುವುದು.  ಇಲ್ಲಿಂದ ಮಾರ್‍ಸೇಲ್ಸ್‍ಗೆ ಹಡಗಿನ ಸಂಚಾರವಿದೆ.  

1942 ನವಂಬರ್‍ನಿಂದ ಆಗಸ್ಟ್ 1944 ರವರೆಗೆ ಉತ್ತರ ಆಫ್ರಿಕದ ಸ್ನೇಹಪರ ರಾಷ್ಟ್ರಗಳ ಸೇವೆಗಳಿಗೆ ಕೇಂದ್ರವಾಗಿತ್ತು.

(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ